ಯುಗಾದಿಯ ಪರ್ವದಂದು ಶ್ರೀ ಜಗದ್ಗುರು ಪಂಚಾಚಾರ್ಯರ ಅವತಾರದ ಯುಗಮಾನೋತ್ಸವವನ್ನು ಕರ್ನಾಟಕ ಸರ್ಕಾರದಿಂದ ಅಧಿಕೃತವಾಗಿ ಆಚರಿಸಲು ಆಗ್ರಹಿಸಿ

ಭಾರತೀಯ ಸನಾತನ ಧರ್ಮಗಳಲ್ಲಿ ವೀರಶೈವಧರ್ಮವು ಒಂದು ಪ್ರಮುಖವಾದುದಾಗಿದೆ. ಈ ಧರ್ಮಕ್ಕೆ ಯುಗಯುಗಗಳ ಪರಂಪರೆಯಿದೆ. ಸಮಸ್ತ ಮನುಕುಲದ ಕಲ್ಯಾಣಕ್ಕಾಗಿ ಶ್ರೀ ಜಗದ್ಗುರು ಪಂಚಾಚಾರ್ಯರು ಸನಾತನ ಕಾಲದಿಂದ ಪ್ರತೀ ಯುಗದಲ್ಲಿಯೂ ಅವತರಿಸಿ ಬಂದು ಜಾತಿ, ಮತ, ಕುಲ, ಆಶ್ರಮ ವ್ಯವಸ್ಥೆಯ ವೈಷಮ್ಯದಿಂದ ಬಳಲಿಹೋಗಿದ್ದ ಸಮಾಜದಲ್ಲಿ, ವರ್ಣ ವ್ಯವಸ್ಥೆಯನ್ನು ಮೀರಿದ ಮಾನವ ಧರ್ಮವನ್ನು ಸ್ಥಾಪಿಸುವುದರ ಮೂಲಕ ಭಗವಂತನು ಸರ್ವರಿಗೂ ಸ್ವಾಭಾವಿಕವಾಗಿ ಕರುಣಿಸಿರುವ ಗೌರವ ಮತ್ತು ಸಮಾನತೆಯನ್ನು ಕಾಲದಿಂದ ಕಾಲಕ್ಕೆ ಮರುಪ್ರತಿಷ್ಠಾಪಿಸಿದರು.ಶ್ರೀ ಜಗದ್ಗುರು ಪಂಚಾಚಾರ್ಯರು ದೇಶದಾದ್ಯಂತ ಸಂಚರಿಸಿ ಪಂಚ ಪೀಠಗಳನ್ನು ಸ್ಥಾಪಿಸುವುದರ ಮೂಲಕ ದೇಶವನ್ನು ಒಗ್ಗೂಡಿಸಿದರು.

ಜಗದ್ಗುರು ಪಂಚಾಚಾರ್ಯರು ಮಾಡಿದ ಅನಂತ ಸಮಾಜಮುಖೀ ಕೆಲಸಗಳಲ್ಲಿ ಆಯ್ದ ಕೆಲವನ್ನು ಕೆಳಗೆ ಉದಾಹರಿಸಲಾಗಿದೆ.

೧. ಸಮಾಜೋದ್ಧಾರದ, ಸಮಾನತೆ ಹಾಗು ಗೌರವದ ಆಧಾರದ ಮೇಲೆ ರಾಷ್ಟ್ರ ಹಾಗು ವಿಶ್ವ ಭಾತೃತ್ವ ಸಂದೇಶವನ್ನು ಸನಾತನ ಕಾಲದಿಂದ ಪಂಚಪೀಠಗಳು ಮಾಡುತ್ತಲಿವೆ. ಇದಕ್ಕೆ ಸನಾತನ ಋಷಿಗಳಾದ ಅಗಸ್ತ್ಯ, ದೂರ್ವಾಸ , ದಧೀಚಿ , ವ್ಯಾಸ , ಸಾನಂದ ಮುಂತಾದವರಿಗೆ ದೀಕ್ಷೆಯನ್ನು ನೀಡಿ , ಪಡ್ವಿಡಿ , ವೃಷ್ಠಿ , ಲಂಬನ, ಮುಕ್ತಾಗುಚ್ಛ, ಪಂಚವರ್ಣಗಳೆಂಬ ಪಂಚಸೂತ್ರಗಳನ್ನು ಉಪದೇಶಿಸಿದ ಇತಿಹಾಸವೇ ಸಾಕ್ಷಿ. ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಸೂತ್ರಗಳನ್ನು ಪರಿಚಯಿಸಿದ ಗೌರವ ಪಂಚಾಚಾರ್ಯರಿಗೆ ಸಲ್ಲುತ್ತದೆ.ಇದರಿಂದ ವೇದಾಗಮಗಳಲ್ಲಿನ ಸಾರವನ್ನು ಸುಲಭವಾಗಿ ಪ್ರತಿಯೊಬ್ಬ ಮಾನವನು ತಿಳಿದುಕೊಳ್ಳಲು ಅನುಕೂಲವಾಯಿತು.

೨. ಸಾಮಾಜಿಕ ಸಮಾನತೆಯನ್ನು ಸಮಭಾವವನ್ನು ಧರ್ಮ ಸಿದ್ಧಾಂತದ ಮೂಲಕ ಪ್ರಚುರಪಡಿಸಿದರು.

೩. ವಿಶ್ವದ ಧಾರ್ಮಿಕ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಹಿಳೆಯರಿಗೆ ಧರ್ಮದಲ್ಲಿ ಮತ್ತು ಸಮಾಜದಲ್ಲಿ ಸಮಾನ ಸ್ಥಾನ ಮಾನಗಳನ್ನು ದೊರಕಿಸಿ ಮಹಿಳಾ ಸಮಾನತೆಯನ್ನು ಧರ್ಮದ ತಳಹದಿಯ ಮೇಲೆ ಕಲ್ಪಿಸಿಕೊಟ್ಟರು.

೫. ಹಲವಾರು ಶೈಕ್ಷಣಿಕ ಕಾರ್ಯಗಳನ್ನು ಮಾಡುತ್ತಾ ಸಮಾಜದಲ್ಲಿ ಜ್ಞಾನದ ಬೆಳಕನ್ನು ಹೆಚ್ಚಿಸಿದರು
ಇದಕ್ಕೆ ಇತ್ತೀಚಿನ ಉದಾಹರಣೆಯನ್ನೇ ತೆಗೆದುಕೊಂಡರೆ ಭಾರತದ ಶೈಕ್ಷಣಿಕ ಹಿತದೃಷ್ಟಿಯನ್ನಿಟ್ಟುಕೊಂಡು ಜಗತ್ಪ್ರಸಿದ್ದ ಬನಾರಸ್ ಹಿಂದೂ ವಿಶ್ವವಿದ್ಯಾಲಯವನ್ನು ೧೯೧೬ರಲ್ಲಿ ಸ್ಥಾಪಿಸಿದ ಮದನ್ ಮೋಹನ್ ಮಾಳವೀಯರವರಿಗೆ ೧೩೦೦ ಎಕರೆ ಭೂಮಿಯನ್ನು ಪಂಚಪೀಠಗಳಲ್ಲೊಂದಾಗಿರುವ ಶ್ರೀಮತ್ ಕಾಶೀಪೀಠವು ಆಶೀರ್ವಾದ ಪೂರ್ವಕವಾಗಿ ದಾನ ಮಾಡಿದ ವಿಚಾರವನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿರುವ ಶಿಲಾಶಾಸನ ತಿಳಿಸುತ್ತದೆ. ಇದೊಂದು ಪ್ರಸಿದ್ಧ ಉದಾಹರಣೆಯಷ್ಟೇ ಹೀಗೆ ಅನಾದಿಕಾಲದಿಂದ ಇಂದಿನವರೆಗೂ ಪಂಚಪೀಠಗಳಡಿಯಲ್ಲಿ ಪಂಚಾಚಾರ್ಯರು ಹಲವಾರು ಲೋಕೋದ್ಧಾರ ಕೈಂಕರ್ಯಗಳನ್ನು ಮಾಡಿದ ನಿದರ್ಶನಗಳು ದೊರೆಯುತ್ತವೆ.

೬. ಅಷ್ಟೇ ಅಲ್ಲದೆ ಮಾದಿಗ ಜನಾಂಗದ ಮಾತಂಗನಿಗೆ ದೀಕ್ಷೆಯನ್ನು ನೀಡಿ ಮುಂದೆ ಅವನನ್ನು ಜ್ಞಾನ ಯೋಗಿಯಾಗುವಂತೆ ಮಾಡಿದ ರೇಣುಕಾಚಾರ್ಯರು ಈ ಮೂಲಕ ಅಸ್ಪೃಶೋದ್ದಾರವನ್ನು ಸನಾತನ ಕಾಲದಲ್ಲಿ ಮಾಡಿದ ಸಾಮಾಜಿಕ ಕ್ರಾಂತಿಯ ಘನತೆ ಸಲ್ಲಬೇಕಾದದ್ದು ಕೂಡ ಪಂಚಾಚಾರ್ಯರಿಗೆ.

೭.ಈ ಪರಂಪರೆಯಲ್ಲಿ ಬಂದ ಹಾಗು ಶ್ರೀ ಜಗಜ್ಯೋತಿ ಬಸವೇಶ್ವರರ ಸಮಕಾಲೀನರಾದ ರೇವಣಸಿದ್ದೇಶ್ವರರು ಬಿಜ್ಜಳನ ಆಸ್ಥಾನದಲ್ಲಿ ಯಜ್ಞಕ್ಕೆ ಬಲಿ ನೀಡಲು ಬಂಧಿಸಿ ಸಿದ್ಧಗೊಳಿಸಿದ್ದ ಸಾವಿರಾರು ಕನ್ಯೆಯರನ್ನು ಅವನ ಕಣ್ಣು ತೆರೆಯಿಸುವ ಮೂಲಕ ಬಿಡುಗಡೆ ಗೊಳಿಸಿದರು.

೮. ಹನ್ನೆರಡನೆಯ ಶತಮಾನದ ಶರಣ ಕ್ರಾಂತಿಯ ಮೂಲ ಘನ ಗಂಗೋತ್ರಿಯು ಪಂಚಾಚಾರ್ಯರೇ ಎಂಬುದು ಶರಣರ ಅಧ್ಯಯನದಿಂದ ಗೊತ್ತಾಗುತ್ತದೆ. ಹಾಗು ಧಾರ್ಮಿಕ ಸಿದ್ಧಾಂತವನ್ನು ಪ್ರಚುರಪಡಿಸುವದಕ್ಕಾಗಿ ಆ ಮೂಲಕ ಜನತೆಯ ಏಳಿಗೆಯನ್ನು ಬಯಸಿ ಅನೇಕ ಗ್ರಂಥಗಳನ್ನು ಸಮಾಜಕ್ಕೆ ಕೊಡಮಾಡುವುದರ ಮೂಲಕ ಅಪಾರವಾದ ಸಾಹಿತ್ಯಿಕ ಕೊಡುಗೆಯನ್ನು ಪಂಚಾಚಾರ್ಯರು ದಯಪಾಲಿಸಿದ್ದು ಬಹುದೊಡ್ಡ ಸಂಗತಿಯಾಗಿದೆ.

೯. ಧಾರ್ಮಿಕ ಮಾರ್ಗದಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು.

ನಮ್ಮಲ್ಲಿ ಕೆಲವು ಪುರಾತನರ ಹೆಸರುಗಳು ಹಚ್ಚ ಹಸಿರಾಗಿವೆ ಅಂತೆಯೇ ಅವು ಅತ್ಯಂತ ಮಾನ್ಯವಾಗಿವೆ ಹಾಗು ಪುಣ್ಯ ಪ್ರದವೂ ಆಗಿವೆ ಇದರಲ್ಲಿ ಪಂಚಾಚಾರ್ಯರು ಕೂಡ. ಅದಕ್ಕೆ ಅವರ ಕ್ರಿಯಾಶೀಲ ಜೀವನವೇ ಕಾರಣ. ಸನಾತನ ಕಾಲದಿಂದಲೂ ಮಾನವಕಲ್ಯಾಣಕ್ಕಾಗಿ ಪಂಚಾಚಾರ್ಯರು ತಮ್ಮ ಕೊಡುಗೆಯನ್ನು ಸಮಾಜಕ್ಕೆ ಕೊಟ್ಟಿದ್ದು ಇಂದು ಹಲವಾರು ಭಕ್ತಾದಿಗಳು ಪಂಚಾಚಾರ್ಯರನ್ನು ತಮ್ಮ ಹೃದಯದಲ್ಲಿಟ್ಟುಕೊಂಡು ನಿತ್ತ್ಯವು ಪೂಜಿಸುತ್ತಿದ್ದಾರೆ. ಜಾತಿ ಮತಗಳನ್ನು ಮೀರಿ ಹಲವಾರು ಜನ ಆರಾಧಿಸುತ್ತಿದ್ದಾರೆ.

ಇಂತಹ ಆದ್ಯ ಪಂಚಾಚಾರ್ಯರ ಜಯಂತಿಯನ್ನು ಸರಕಾರದಿಂದ ಮಾಡುವುದರ ಮೂಲಕ ಒಂದು ಸಾಮಾಜಿಕ ಮಾನವೀಯ ಮೌಲ್ಯವನ್ನು ಹೊಂದಿರುವ ಬಹುಶ್ರೇಷ್ಠವಾದ ಆದರ್ಶಗಳನ್ನೊಳಗೊಂಡ ಮಾನವ ಧರ್ಮವನ್ನು ಹಾಗು ಪಂಚಾಚಾರ್ಯರ ಘನತೆಯನ್ನು ಎತ್ತಿ ಹಿಡಿಯಬೇಕು ಹಾಗು ಅಸಂಖ್ಯಾತ ಭಕ್ತಾದಿಗಳ ಬೇಡಿಕೆಯನ್ನು ನೆರವೇರಿಸಬೇಕೆಂದು ರಾಜ್ಯದ ಘನವೆತ್ತ ಸರಕಾರಕ್ಕೆ ಈ ಮೂಲಕ ಆಗ್ರಹಿಸುತ್ತೇವೆ.

ನೀವು ಈ ಮೇಲ್ಕಂಡ ಅರ್ಜಿಯನ್ನು ಬೆಂಬಲಿಸಿ ಸಹಿ ಹಾಕಲು ಕೆಳಗಿನ ಬಟನ್ ಬಳಸಬಹುದು ಅಥವಾ 08030636485 ಗೆ ಕರೆ ಮಾಡಿ (missed call) ಬೆಂಬಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮತ್ತು ಇದನ್ನು ಬೆಂಬಲಿಸುವವರ ಸಂಖ್ಯೆಗಾಗಿ  Link

Comments are closed.